ಟಹೀಟೀ
	ದಕ್ಷಿಣ ಪೆಸಿಫಿಕ್ ಸಾಗರದ ಮಧ್ಯದಲ್ಲಿ ಫ್ರೆಂಚ್ ಪಾಲಿನೀಷ್ಯಕ್ಕೆ ಸೇರಿದ ಸೊಸೈಟಿ ದ್ವೀಪಗಳ ಪೂರ್ವಗುಂಪಿನ (ವಿಂಡ್ವರ್ಡ್ ಐಲೆಂಡ್ಸ್) ಒಂದು ದ್ವೀಪ. ದಕ್ಷಿಣ ಪೆಸಿಫಿಕ್‍ನಲ್ಲಿ ಫ್ರೆಂಚರಿಗೆ ಸೇರಿದ ದ್ವೀಪಗಳ ಪೈಕಿ ಅತ್ಯಂತ ದೊಡ್ಡದು, ಅತ್ಯಂತ ಮುಖ್ಯವಾದ್ದು. ದ.ಅ. 17º40' ಮತ್ತು ಪ.ರೇ. 149º22' ಮೇಲಿರುವ ಈ ದ್ವೀಪ ವಾಯವ್ಯದಿಂದ ಆಗ್ನೇಯಕ್ಕೆ ಚಾಚಿ ಘಂಟಾಪಾತ್ರದ ಅಥವಾ 8ರ ಆಕಾರದಲ್ಲಿದೆ. ಇದರ ದೊಡ್ಡ ಭಾಗಕ್ಕೆ ಟಹೀಟೀ ನುಯೀ, ಚಿಕ್ಕದಕ್ಕೆ ಟಹೀಟೀ ಇಟೀ ಅಥವಾ ಟೈ ಅರಪೊ ಎಂಬ ಹೆಸರುಗಳಿವೆ. ಇವೆರಡನ್ನೂ ಸೇರಿಸುವ ಭೂಕಂಠ ಟರವಾವೋ. ಈ ದ್ವೀಪದ ಉದ್ದ ಸು. 53 ಕಿಮೀ. ವಿಸ್ತೀರ್ಣ 1,041 ಚ.ಕಿಮೀ. ಜನಸಂಖ್ಯೆ ಸು. 1,20,000 (2004) ರಾಜಧಾನಿ ಪಾಪೀಯೇಟೀ.

	ಟಹೀಟಿಯೂ ಇತರ ಪೆಸಿಫಿಕ್ ದ್ವೀಪಗಳ ಲಕ್ಷಣಗಳನ್ನೊಳಗೊಂಡಿದೆ. ಒಳನಾಡಿನ ಮೇಲ್ಮೈ ಎರಡು ಪರ್ವತಗಳಿಂದ ರೂಪುಗೊಂಡಿದೆ. ಎರಡೂ ಜ್ವಾಲಾಮುಖೀಯ. ಈ ಪರ್ವತಗಳು ಕಡಿದಾದ ಕಣಿವೆಗಳಿಂದ ವಿಭಕ್ತವಾಗಿವೆ. ದ್ವೀಪಕ್ಕೆ ಅಂಚುಕಟ್ಟಿದಂತೆ ಹವಳದ ಕರೆಯಿದೆ. ಇದರ ಅಗಲ 1-3ಕಿ.ಮೀ. ಟಹೀಟೀ ನುಯಿಯ ಓರಹೇನಾ ಶಿಖರದ ಎತ್ತರ 2,322 ಮೀ. ಇನ್ನೊಂದು ಶಿಕರ ಆವುರೈ 2,069 ಮೀ. ಟಹೀಟಿಯೂ ಇಟೀಯ ಅತ್ಯುನ್ನತ ಶಿಖರವಾದ ರೋನಿಯೋ 1,323 ಮೀ. ಎತ್ತರವಾಗಿದೆ. ಈ ಪರ್ವತಗಳ ಹಾಗೂ ಕರಾವಳಿಯ ನಡುವೆ ಕಿರಿದಾದ ಆದರೂ ತುಂಬ ಫಲವತ್ತಾದ ಮೈದಾನ ಪ್ರದೇಶವುಂಟು. ಈ ಪರ್ವತಗಳಲ್ಲಿ ಹುಟ್ಟಿ ಮೈದಾನವನ್ನು ದಾಟಿ ಕಚ್ಛ ಅಥವಾ ಅನೂಪ ಪ್ರದೇಶವನ್ನು ಸೇರುವ ಕೆಲವೊಂದು ಕಿರುದೊರೆಗಳು ಹಾಗೂ ಝರಿಗಳು ಮಳೆಗಾಲದಲ್ಲಿ ತುಂಬಿ ಹರಿಯುತ್ತವೆ. ವೈಹಿರಿಯಾ ಎಂಬುದು ಪರ್ವತಗಳ ನಡುವೆ ಎತ್ತರದಲ್ಲಿರುವ ಒಂದು ಸರೋವರ.

	ಟಹೀಟೀ ಪೂರ್ವ ವಾಣಿಜ್ಯಮಾರುತಗಳ ವಲಯದಲ್ಲಿರುವುದರಿಂದ ಇಲ್ಲಿ ಆದ್ರ್ರ ಮತ್ತು ಶುಷ್ಕ ಭಾಗಗಳು ಸ್ಫುಟವಾಗಿ ಎದ್ದುತೋರುತ್ತವೆ. ಇವುಗಳ ವಾರ್ಷಿಕ ಸರಾಸರಿ ಮಳೆ ಅನುಕ್ರಮವಾಗಿ 2,710 ಮಿಮೀ. ಮತ್ತು 1,836 ಮಿಮೀ. ಡಿಸೆಂಬರ್ ಮತ್ತು ಮಾರ್ಚ್ ನಡುವೆ ಗರಿಷ್ಠ ಮಳೆ ಉಷ್ಣತೆ ಸಾಮಾನ್ಯವಾಗಿ ಅಧಿಕವಾಗಿರುತ್ತದೆ; ಜುಲೈ-ಆಗಸ್ಟ್‍ಗಳಲ್ಲಿ 76º ಫ್ಯಾ. ನಿಂದ ಜನವರಿ-ಫೆಬ್ರುವರಿಗಳಲ್ಲಿ 84º ಫ್ಯಾ.ವರೆಗೆ ವ್ಯತ್ಯಾಸವಾಗುತ್ತದೆ. ಇಲ್ಲಿ ತೆಂಗು, ಕೇದಗೆ, ಲಂಟವಾಣಿ, ದಾಸವಾಳ ಮತ್ತು ಹಣ್ಣುಗಳು ಬೆಳೆಯುತ್ತವೆ.

	ಜನ: ಟಹೀಟೀಯನರು ಸೊಸೈಟಿ ದ್ವೀಪಗಳಲ್ಲಿ ಇನ್ನೊಂದಾದ ರೈಯಟೇಯದಿಂದ ಬಂದ ಪಾಲಿನೀಷ್ಯನರು. ಈ ಪ್ರಾಚೀನ ಸಮುದಾಯ ರಾಜಕೀಯ ಕ್ಷೇತ್ರಗಳನ್ನು ರೂಪಿಸಿಕೊಂಡು ಬಾಳತೊಡಗಿತ್ತು. ಧಾರ್ಮಿಕ ಕಟ್ಟುಪಾಡುಗಳಿಗೆ ಒಳಗಾದ ಹುದ್ದೆ ಮತ್ತು ಅಧಿಕಾರವ್ಯವಸ್ಥೆ ಇದರಲ್ಲಿ ಎದ್ದುಕಾಣುತ್ತಿತ್ತು. ಈ ಜನರು ಮಾನವಾತೀತ ಶಕ್ತಿಗಳಲ್ಲಿ ನಂಬುಗೆ ಇಟ್ಟುಕೊಂಡಿದ್ದರು. ಅಂಥ ಶಕ್ತಿಗಳಿಂದ ಸಮನ್ವಿತರಾಗಿದ್ದರೆಂದು ನಂಬಲಾಗಿದ್ದ, ಅರಿಯಿನುಯಿ ಎಂಬ ಅರ್ಚಕ ಪ್ರಮುಖರು ವಿಶೇಷ ಅಧಿಕಾರ ಚಲಾಯಿಸುತ್ತಿದ್ದರು. ಸಮೋವದಂತೆ ಇದೂ ಪಾಲಿನೀಷ್ಯನ್ ಸಂಪ್ರದಾಯ ಹಾಗೂ ಸಂಸ್ಕøತಿಗಳ ತೂಗುದೊಟ್ಟಿಲೆಂದು ಖ್ಯಾತಿ ಹೊಂದಿತ್ತು. ಈ ಸಂಸ್ಕøತಿಯ ವಿನಾಶಕ್ಕೆ ಬಿಳಿಯರ ಸಂಪರ್ಕವೇ ಕಾರಣವಾಯಿತು. ಮುಂದೆ ಐರೋಪ್ಯ ಸಂಸ್ಕøತಿಯ ಪ್ರಭಾವದಿಂದಾಗಿ ಹಾಗೂ ಅಂತರ್ ವಿವಾಹದಿಂದಾಗಿ ಟಹೀಟೀಯ ಸಾಂಸ್ಕøತಿಕ ಸ್ವರೂಪ ಬಹುಮಟ್ಟಿಗೆ ಬದಲಾಯಿತು. ಐರೋಪ್ಯ ಸಂಪರ್ಕದ ಫಲವಾಗಿ ಕ್ಷೀಣಿಸಿದ ಟಹೀಟಿಗಳ ಜನಸಂಖ್ಯೆ ಈಚೆಗೆ ಮತ್ತೆ ಬೆಳೆಯುತ್ತಿದೆ. ಟಹೀಟೀಯಲ್ಲಿ ಟಹೀಟಿಗಳು ಮಾತ್ರವಲ್ಲದೆ ಫ್ರೆಂಚರು, ಓಷಿಯಾನಿಕ್ ಮೂಲದ ಫ್ರೆಂಚರು, ಮೂಲತಃ ಕೂಲಿಯಾಳುಗಳಾಗಿ ಇಲ್ಲಿಗೆ ತರಲಾದ ಚೀನೀಯರು ಮತ್ತು ಇತರರು ವಾಸವಾಗಿದ್ದಾರೆ.

	ಇತಿಹಾಸ: 1606ರಲ್ಲಿ ಪೇದ್ರೂ ಫರ್ನಾಂಡಿಷ್ ಕೆಯಿರಾಸ್ ಎಂಬ ಪೋರ್ಚುಗೀಸ್ ನಾವಿಕ ಈ ದ್ವೀಪವನ್ನು ಕಂಡುಹಿಡಿದ. ಆದರೆ. 1767ರಲ್ಲಿ ಕ್ಯಾಷ್ಟನ್ ಸ್ಯಾಮುಯೆಲ್ ವ್ಯಾಲಿಸ್ ಎಂಬವನು ಗ್ರೇಟ್ ಬ್ರಿಟನ್ನಿನ ಪರವಾಗಿ ಟಹೀಟೀಯನ್ನು ತನ್ನ ವಶಕ್ಕೆ ತೆಗೆದುಕೊಂಡ. ಮುಂದಿನ ವರ್ಷ ಲೂಯಿ ಆಂಟ್ವಾನ್ ಬೂಗ್ಯಾನ್‍ವೀಲ್ ಎಂಬಾತ ಈ ದ್ವೀಪದ ಮೇಲೆ ಫ್ರಾನ್ಸಿನ ಹಕ್ಕನ್ನು ಸ್ಥಾಪಿಸಿದ. ಈ ದ್ವೀಪವನ್ನು ಸಂದರ್ಶಿಸಿದವರಲ್ಲಿ ಜೇಮ್ಸ್ ಕುಕ್ (1769. 1773. 1777). ವಿಲಿಯಂ ಬೈ (1788) ಇವರು ಮುಖ್ಯರು. ಇಲ್ಲಿ ಖಾಯಂ ಆಗಿ ನೆಲೆಸಿದ ಐರೋಪ್ಯರು ಲಂಡನಿನ ಮಿಷನರಿ ಸಂಘದವರು (1797). ಇವರ ಪ್ರಭಾವದಿಂದಲೂ ಬಂದೂಕಗಳನ್ನು ಒದಗಿಸಿದ ಇತರ ಐರೋಷ್ಯ ನೆಲಸಿಗರ ಪ್ರಭಾವ ಬೆಂಬಲಗಳಿಂದಲೂ ಸ್ಥಳೀಯ ಪೊಮೇರ್ ಮನೆತನ ಪ್ರಬಲವಾಗಿ ಸಮಗ್ರ ದ್ವೀಪದ ಮೇಲೆ ತನ್ನ ಪ್ರಭಾವವನ್ನು ಸ್ಥಾಪಿಸಲು ಯತ್ನಿಸಿತು. 2ನೆಯ ಪೊಮೇರ್ (1803-1824) 1812ರಲ್ಲಿ ಕ್ರೈಸ್ತ ಧರ್ಮಕ್ಕೆ ಪರಿವರ್ತನೆ ಹೊಂದಿದ. ಈ ರೀತಿ ಐರೋಪ್ಯರ ಬೆಂಬಲ ಗಳಿಸಿ. ಮೂರು ವರ್ಷಗಳ ತರುವಾಯ ತನ್ನ ಅಧಿಪತ್ಯವನ್ನು ಸ್ಥಾಪಿಸಿದ. 3ನೆಯ ಪೊಮೇರ್ (1824-27) ಹಾಗೂ ರಾಣೆ ಪೊಮೇರ್ (1827-77) ಇವರು ತಮ್ಮ ಆಳ್ವಿಕೆಯ ಅವಧಿಯಲ್ಲಿ ಪ್ರತಿಸ್ಪರ್ಧಿಗಳನ್ನು ಎದುರಿಸಬೇಕಾಯಿತು. ಅಷ್ಟೇ ಅಲ್ಲ. ಟಹೀಟೀ ಜನಸಂಖ್ಯೆ ಈ ಅವಧಿಯಲ್ಲಿ. ಮಧ್ಯಪಾನ, ವ್ಯಭಿಚಾರ ಹಾಗೂ ರೋಗರುಜಿನಗಳಿಂದ ಕ್ಷೀಣಿಸಿತು. 1836ರಲ್ಲಿ ಟಿಹೀಟೀಯಲ್ಲಿ ತಮ್ಮ ಧಾರ್ಮಿಕ ಸಂಸ್ಥೆಯನ್ನು ಫ್ರೆಂಚ್ ರೋಟ್ ರೋಮನ್ ಕ್ಯಾತೊಲಿಕರು ಸ್ಥಾಪಿಸಬಯಸಿದಾಗ ಇಂಗ್ಲಿಷ್ ಪಾದ್ರಿಗಳ ಸಲಹೆಯಂತೆ ರಾಣೆ ಪೊಮೇರ್ ಅವರಿಗೆ ಅನುಮತಿ ನಿರಾಕರಿಸಿ ಆ ಧರ್ಮ ಪ್ರಚಾರಕರನ್ನು ಸ್ವದೇಶಕ್ಕೆ ವಾಪಸು ಕಳಿಸಿದಳು. 1842ರಲ್ಲಿ ಏಬೆಲ್ ಡೂಪ್‍ಟೀ ಟ್ವಾರನ ನೇತೃತ್ವದಲ್ಲಿ ಫ್ರೆಂಚ್ ನೌಕಾಪಡೆಯೊಂದು ಟಿಹೀಟೀಯ ಮೇಲೆ ದಾಳಿ ಮಾಡಿ ಅದನ್ನು ತನ್ನ ವಶಕ್ಕೆ ತೆಗೆದುಕೊಂಡಿತು. ಈ ದಳ 1880ರ ಹೊತ್ತಿಗೆ ಬಹುಮಟ್ಟಿಗೆ ನಿಷ್ಕ್ರಿಯವೇ ಆಗಿತ್ತು. ಆಗ ರಾಣಿ ಪೊಮೇರಳ ಮಗ 5ನೆಯ ಪೊಮೇರ್ ಸಿಂಹಾಸನದಿಂದ ಕೆಳಗಿಳಿದ. ಟಹೀಟೀ ಫ್ರೆಂಚ್ ವಸಾಹತುವಾಗಿ ಫೋಷಿತವಾಯಿತು. 

	1885ರ ಆಜ್ಞೆಯೊಂದರ ಪ್ರಕಾರ ಪೌರ ಆಡಳಿತ ವ್ಯವಸ್ಥೆಯೊಂದು ರೂಪುಗೊಂಡಿತು. ಟಹೀಟೀಯನ್ನು ಜಿಲ್ಲೆಗಳನ್ನಾಗಿ ವಿಭಜಿಸಿ. ಆಡಳಿತಾಧಿಕಾರಿಗಳನ್ನು ನೇಮಿಸಲಾಯಿತಾದರೂ ಅಧಿಕಾರವೆಲ್ಲ ಫ್ರೆಂಚರಲ್ಲಿಯೇ ಕೇಂದ್ರೀಕೃತವಾಗಿತ್ತು. ಎರಡನೆಯ ಮಹಾಯುದ್ಧದ ತರವಾಯ ಟಹೀಟೀಯಲ್ಲಿ ಚುನಾಯಿತ ಸದಸ್ಯರನ್ನೊಳಗೊಂಡ ಪ್ರಾದೇಶಿಕ ಸಭೆಯನ್ನು ಸ್ಥಾಪಿಸಲಾಯಿತು. 1957ರಲ್ಲಿ ಸರ್ಕಾರಿ ಪರಿಷತ್ತು ಅಸ್ತಿತ್ವಕ್ಕೆ ಬಂತು. 1952ರಲ್ಲಿ ನಡೆದ ಜನಮತಗಣನೆಯಲ್ಲಿ ಟಹೀಟೀ ಫ್ರಾನ್ಸಿನ ಪರವಾಗಿ ಮತವನ್ನಿತ್ತಿತು. ಇಂದು ಟಹೀಟೀಯ ಬಹುಪಾಲು ನಿವಾಸಿಗಳು ಫ್ರೆಂಚ್ ಪೌರತ್ವದ ಹಕ್ಕುಗಳನ್ನು ಹೊಂದಿದ್ದಾರೆ. ಈ ದ್ವೀಪಸಮುದಾಯದ ಈಚಿನ ಇತಿಹಾಸ ಫ್ರಾನ್ಸಿನ ಸಾಗರೋತ್ತರ ಸಾಮ್ರಾಜ್ಯದ ಇತಿಹಾಸದಲ್ಲಿ ಒಂದಾಗಿದೆ.

	ಇಲ್ಲಿಯ ಶಿಕ್ಷಣ ಸರ್ಕಾರದ ಮತ್ತು ಸಹಾಯಧನ ಪಡೆಯುವ ಮಿಷನರಿ ಸಂಸ್ಥೆಗಳ ಜವಾಬ್ದಾರಿ. ಇದು ಸಾಮಾನ್ಯವಾಗಿ ಆರೋಗ್ಯಕರ ಪ್ರದೇಶ. ಮಲೇರಿಯ ಇಲ್ಲಿಲ್ಲ. ಆನೆಕಾಲುರೋಗವನ್ನು ಹರಡುವ ಸೊಳ್ಳೆಗಳು ಇವೆ. ಇಲ್ಲಿ ಕ್ಷಯರೋಗ ವ್ಯಾಪಕವಾಗಿದೆ. 

	ವ್ಯವಸಾಯ ಇಲ್ಲಿಯ ಪ್ರಧಾನ ಕಸಬು. ಕೊಬ್ಬರಿ ಮುಖ್ಯ ನಿರ್ಯಾತ. ಇತರ ನಿರ್ಯಾತಗಳು ಸಕ್ಕರೆ, ರಮ್, ವೆನಿಲಾ ಮತ್ತು ಫಾಸ್ಫೇಟ್. ನಿಂಬೆ, ಕಿತ್ತಲೆ, ಸೇಬು, ಮಾವು ಮೊದಲಾದ ಉಷ್ಣವಲಯದ ಹಣ್ಣುಗಳು, ಬಾಳೆಹಣ್ಣು, ಕೆಸವು, ಗೆಣಸು, ತಂಬಾಕು-ಇವುಗಳಿಗೆ ಸ್ಥಳೀಯ ಬೇಡಿಕೆಯೇ ಹೆಚ್ಚಾಗಿದೆ. ಇಲ್ಲಿ ಮೀನುಗಳು ಯಥೇಚ್ಭವಾಗಿ ಸಿಗುತ್ತವೆ. ಹೈನುಗಾರಿಕೆ, ಅನಾನಸ್ ಡಬ್ಬೀಕರಣ, ಸಕ್ಕರೆ ಮತ್ತು ಮದ್ಯತಯಾರಿಕೆ-ಈ ಉದ್ಯಮಗಳು ಬೆಳೆಯುತ್ತಿವೆ. ಸಣ್ಣ ಹಡಗು ನಿರ್ಮಾಣ ಕಟ್ಟೆಯೊಂದು ಇದೆ. 

	ಟಹೀಟೀ ನಿಸರ್ಗಸೌಂದರ್ಯದಿಂದ ಕೂಡಿದ ಫ್ರೆಂಚ್ ಕಲಾವಿದ ಪಾಲ್ ಗೋಗ್ಯಾನ್ (1848-1903) ಟಹೀಟೀಯಲ್ಲಿ ನೆಲಸಿ ಅಲ್ಲಿಯ ಜನರ, ಜೀನದ ಹಾಗೂ ನಿಸರ್ಗದ ಅದ್ಬುತ ಚಿತ್ರಗಳನ್ನು ರಚಿಸಿದ. ಅಮೆರಿಕೆಯ, ಜೇಮ್ಸ್ ಮೆಚೆನರ್, ಹವ್ರ್ಮನ್ ಮೆಲ್ವಿಲ್ಲೆ, ಸ್ಕಾಟ್‍ಲೆಂಡ್‍ನ ರಾಬರ್ಟ್ ಲೂಯಿಸ್ ಸ್ಟೀವನ್ ಸನ್, ಇವರುಗಳ ಬರಹಗಳಿಂದ ಈ ದ್ವೀಪದ ಸೌಂದರ್ಯ ಹೆಚ್ಚು ಜನರಿಗೆ ತಿಳಿಯುವಂತಾಯಿತು. ಪ್ರವಾಸಿಗಳು ಹೆಚ್ಚು ಬರಲಾರಂಭಿಸಿದರು.			(ಪಿ.ಜಿ.ಡಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ